ಗೋಪಾಲಕೃಷ್ಣರಾಯರು, ಎಂ

      
ಆಯುರ್ವೇದದ ಮಹಾನ್ ಚೇತನ ಮತ್ತು ವೈದ್ಯಸಾಹಿತಿ ದಿ. ಡಾ|| ಎಂ. ಗೋಪಾಲಕೃಷ್ಣರಾಗರು 1904 ಅಕ್ಟೋಬರ್ ಒಂದರಂದು ದ.ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಿಜಾರ್ ಗ್ರಾಮದಲ್ಲಿ ಜನಿಸಿದರು.  ಸ್ವತಂತ್ರ್ತ ಹೋರಾಟದಲ್ಲಿ ಭಾಗವಹಿಸಲು ಪ್ರಾಥಮಿಕ ಶಿಕ್ಷಣ ತ್ಯಜಿಸಿದವರು ನಂತರ ರಾಷ್ಟ್ರೀಯ ಶಾಲೆ ಸೇರಿದರು.  ಪಂಡಿತ ತಾರಾನಾಥರಿಂದ ಪ್ರಭಾವಿತರಾಗಿ ಆಯುರ್ವೇದ ಕಲಿಯಲು ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜು ಸೇರಿದರು.  ಪ. ತಾರಾನಾಥರನ್ನೇ ತಮ್ಮ ಗುರುಗಳೆಂದು ನಿರ್ಧರಿಸಿದರು. 1928ರಲ್ಲಿ ಆಯುರ್ವೇದ ಪದವಿ ಪಡೆದರು.  1930ರಲ್ಲಿ 'ಕಾಮದ ಗುಟ್ಟು ಎಂಬ ಪುಸ್ತಕ ಬರೆದು ಕಾಮದ ಕುರಿತು ಜನಸಾಮಾನ್ಯರಿಗೆ ತಿಳುವಳಿಕೆ ನೀಡಿದರು.  1936-37ರಲ್ಲಿ 'ಕಲಿಯುಗ ಎಂಬ ಕಾಮ ವಿಜ್ಞಾನದ ಪತ್ರ್ರಿಕೆಯ ಸಂಪಾದಕರಾದರು.  ಆಗಲೇ 'ಪ್ರೇಮಕಲಾ ಎಂಬ ಕಾಮ ಜೀವನವದ ಬಗ್ಗೆ ಉತ್ತಮ ಮಾರ್ಗದರ್ಶನದ ಪುಸ್ತಕ ರಚಿಸಿದರು.  ಆನಂತರ 'ಗರ್ಭ ನಿರೋಧ ಎಂಬ ಕುಟುಂಬ ಯೋಜನೆಯ ಕುರಿತಾದ ಪುಸ್ತಕ ಬರೆದರು.  ಬಹುಶಃ ಕುಟುಂಬ ಯೋಜನೆಯ ಕುರಿತಾದ ಪುಸ್ತಕಗಳಲ್ಲಿ ಭಾರತದಲ್ಲಿಯೇ ಇದು ಮೊದಲನೆಯದು.  ತಮ್ಮ ಹುಟ್ಟೂರಿನಲ್ಲಿ ಧರ್ಮಾರ್ಥ ಚಿಕಿತ್ಸಾಲಯವನ್ನು ನಡೆಸುತ್ತಿದ್ದರು.  ಡಾ|| ಗೋಪಾಲಕೃಷ್ಣರಾಯರು ಅಖಿಲ ಕರ್ನಾಟಕ ಪ್ರಾದೇಶಿಕ ಆಯುರ್ವೇದ ಮಂಡಲದ ಅಧ್ಯಕ್ಷರಾಗಿದ್ದರು.  ಇದೇ ಸಮಯದಲ್ಲಿ  'ದೀರ್ಘಾಯು ಮಾಸಪತ್ರಿಕೆ ಆರಂಭಿಸಿದರು.  1956ರಿಂದ 'ಕಲಿಯುಗ ಮತ್ತು 'ದೀರ್ಘಾಯುಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.  25 ವರ್ಷಗಳ ನಂತರ 'ಕಲಿಯುಗ ಪ್ರಕಾಶಕರ ಅವ್ಯವಸ್ಥೆಯಿಂದ ನಿಂತುಹೋಯಿತು.  ಬೆಂಗಳೂರು ಆಯುರ್ವೇದ ಕಾಲೇಜಿನ ಪ್ರಥಮ ಪ್ರಾಂಶುಪಾಲರಾಗಿ ಸಂಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಇವರು ಸ್ಥಾಪಿಸದ 'ಆಯುರ್ವೇದ ಪ್ರತಿಷ್ಠಾನದ ಆಸ್ಪತ್ರೆ ಉಚಿತವಾಗಿ ಡಾ|| ಗೋಪಾಲಕೃಷ್ಣರಾಯರ ಕುಟುಂಬದವರಿಂದ ಈಗಲೂ ನಡೆಸಲ್ಪಡುತ್ತಿದೆ.  ಇವರು ಬರೆದ ಎರಡು ಪುಸ್ತಕಗಳು ಪಠ್ಯ ಪುಸ್ತಕವಾಗಿದೆ.  10 ಪುಸ್ತಕಗಳು ಪ್ರಕಟವಾಗಿದ್ದು ಇನ್ನೂ ಪ್ರಕಟವಾಗದೇ ಕೈಬರಹದಲ್ಲಿ ಉಳಿದಿರುವ ಪುಸ್ತಕಗಳಿವೆ.  ಕರ್ನಾಟಕ 1990ರ ಸಾಲಿನ ಧನ್ವಂತರಿ ಸ್ವರ್ಣ ಪದಕದ ಪ್ರಶಸ್ತಿಯನ್ನು ದಿ|| ಡಾ|| ಗೋಪಾಲಕೃಷ್ಣರಾಯರಿಗೆ ಮರಣೋತ್ತರವಾಗಿ ನೀಡಿ ಗೌರವಿಸಿದೆ.					(ಡಾ. ವಸುಂಧರಾ ಭೂಪತಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ